ಚಾರುಹಾಸನ್-
ತಮಿಳುನಾಡಿನ ಪರ್ನಕಡಿಯಲ್ಲಿ ಜನಿಸಿದ ಚಾರುಹಾಸನ್ ಕನ್ನಡಕ್ಕೆ ರಾಷ್ಟ್ರಮಟ್ಟದಲ್ಲಿ ಎರಡನೆಯ ಅತ್ಯುತ್ತಮ ನಟ ಪ್ರಶಸ್ತಿ ತಂದುಕೊಟ್ಟ ಕೀರ್ತಿಗೆ ಪಾತ್ರರಾಗಿದ್ದಾರೆ. ಚಾರುಹಾಸನ್ ಹುಟ್ಟು ಕಲಾವಿದರು. ಅವರ ಇಡೀ ಕುಟುಂಬವೇ ಕಲಾಸೇವೆಯಲ್ಲಿ ತೊಡಗಿಕೊಂಡಿದೆ. ಕಿರಿಯ ಸಹೋದರ ಕಮಲಹಾಸನ್ ಭಾರತೀಯ ಚಿತ್ರರಂಗದ ಮೇರುನಟ. ಪುತ್ರಿ ಸುಹಾಸಿನಿ ಹೆಸರಾಂತ ಕಲಾವಿದೆ. ಅಳಿಯ ಮಣಿರತ್ನಂ ಭಾರತೀಯ ಚಿತ್ರರಂಗಕ್ಕೆ ಹೊಸ ತಿರುವು ತಂದುಕೊಟ್ಟ ನಿರ್ದೇಶಕ. ತಮಿಳು ಮಾತೃಭಾಷೆಯಾದರೂ ಕನ್ನಡ, ತೆಲುಗು, ಮಲೆಯಾಳಂ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಅಭಿನಯಿಸಿದ್ದಾರೆ. ತಮಿಳಿನ `ಉದರಿ ಪೂಕ್ಕಳ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಚಾರುಹಾಸನ್ ಸಹಜಾಭಿನಯದಿಂದ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. 1986ರಲ್ಲಿ ಕನ್ನಡಕ್ಕೆ `ಸ್ವರ್ಣಕಮಲ ಪ್ರಶಸ್ತಿ ತಂದುಕೊಟ್ಟ ಗಿರೀಶ್ ಕಾಸರವಳ್ಳಿ ನಿರ್ದೇಶನದ `ತಬರನಕಥೆ ಚಿತ್ರದಲ್ಲಿ ತಬರನ ಪಾತ್ರ ಮಾಡಿದ ಚಾರುಹಾಸನ್ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಗಳಿಸುವ ಮೂಲಕ ಸ್ವರ್ಣಕಮಲ ಪಡೆದುಕೊಂಡರು. ಕರ್ನಾಟಕ ಸರ್ಕಾರ 1986-87ನೆಯ ಸಾಲಿನಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ನೀಡಿ ಗೌರವಿಸಿದೆ. ಇಂಗ್ಲೆಂಡ್, ರಷ್ಯಾ ಮುಂತಾದ ರಾಷ್ಟ್ರಗಳಲ್ಲಿ ನಡೆದ ಚಿತ್ರೋತ್ಸವಗಳಲ್ಲಿ ಪಾಲ್ಗೊಂಡಿದ್ದಾರೆ. 											(ಎ.ಎನ್.ಪ್ರಹ್ಲಾದ್‍ರಾವ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ